Monday, February 16, 2009

ಭಯೋತ್ಪಾದನೆ ಎಂಬ ದೆವ್ವದ ಮನೆ

ಭಯೋತ್ಪಾದನೆಯೆಂಬ ದೆವ್ವದ ಮನೆಯಲ್ಲಿದ್ದೇವೆ; ಎದುರಿಸುವ ಮುತ್ಸದ್ದಿತನವೆಲ್ಲಿ?

ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಹೊಗಳುವ ’ಸಿಂಗ್ ಈಸ್ ಕಿಂಗ್; ಸಿಂಗ್ ಈಸ್ ಕಿಂಗ್’ ಎಂಬ ಹಾಡು ಈಗ ಎಲ್ಲೆಡೆ ಕೇಳಿ ಬರುತ್ತಿದೆ.ಕಿಂಗ್ ಸಿಂಗ್‌ರ ಆಡಳಿತದ ಅವಧಿಯ ರಿಪೋರ್ಟ್ ಕಾರ್ಡ್ ಇದು: ೨೦೦೫ರಿಂದ ಇಲ್ಲಿಯವರೆಗಿನ ಭಯೋತ್ಪಾದನಾ ಹತ್ಯಾಕಾಂಡಗಳಲ್ಲಿ ಮಡಿದವರ ಸಂಖ್ಯೆ (ಬೆಂಗಳೂರು ಮತ್ತು ಅಹ್ಮದಾಬಾದ್ ಸೇರಿ) ೫೪೭ ಆಗುತ್ತದೆ. ಅಂದರೆ, ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ದೇಶದಲ್ಲಿ ಐದೂವರೆ ನೂರು ಜನ ಅಮಾಯಕರ ಬಲಿ! ಅದಕ್ಕಿಂತ ಮೂರು ನಾಲ್ಕು ಪಟ್ಟು ಜನರು ಅರ್ಧ ಕೊಲೆಯಾಗಿದ್ದಾರೆ. ಅಂದರೆ ಅವರು ಇನ್ನರ್ಧ ಜೀವಂತವಾಗಿದ್ದರೂ, ಇತರರಂತೆ ಸಾಮಾನ್ಯ ಬದುಕು ಸಾಗಿಸಲು ಸಾಧ್ಯವಿಲ್ಲ. ಬದುಕಿದ್ದೂ ಸತ್ತವರವರು!ಇದು ನಿಜಕ್ಕೂ ಸರ್ಕಾರ ಮಾಡಿದ ’ಅಭಿವೃದ್ಧಿ’ಯೇ ಸರಿ.


ನಿಜಕ್ಕೂ ’ಸಿಂಗ್ ಈಸ್ ಕಿಂಗ್’!. ೨೦೦೫ರ ಅಕ್ಟೋಬರ್‌ದಿಂದ ಈಚೆಗೆ ದೆಹಲಿಯ ಸರೋಜಿನಿ ಮಾರುಕಟ್ಟೆಯಲ್ಲಿ, ವಾರಾಣಸಿಯಲ್ಲಿ, ಮುಂಬೈನ ರೈಲು ಬೋಗಿಗಳಲ್ಲಿ, ಮಾಲೆಗಾಂವದಲ್ಲಿ, ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ, ಎರಡು ಸಲ ಹೈದ್ರಾಬಾದ್‌ನ ಧಾರ್ಮಿಕ ಪ್ರದೇಶಗಳಲ್ಲಿ, ಉತ್ತರ ಪ್ರದೇಶದ ಕೋರ್ಟ್‌ಗಳಲ್ಲಿ, ರಾಂಪುರದ ಸಿಆರ್‌ಪಿಎಫ್ ಕ್ಯಾಂಪ್‌ಗಳಲ್ಲಿ- ಜೈಪುರದಲ್ಲಿ- ಇದೀಗ ಅಹ್ಮದಾಬಾದ್ ಮತ್ತು ಬೆಂಗಳೂರುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳ ಹಿಂದಿನ ಉದ್ದೇಶಗಳೇನು? ಎಂದು ಹುಡುಕುತ್ತ ಹೋದರೆ ದಿಕ್ಕು ತಪ್ಪಿ ಹೋದೀತು. ಆದರೆ, ಅವುಗಳು ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವಲ್ಲಿ; ಭೀತಿ ಹುಟ್ಟಿಸುವಲ್ಲಿ; ಇಡೀ ವ್ಯವಸ್ಥೆಯನ್ನು ಅತಂತ್ರ ಮಾಡುವಲ್ಲಿ ಯಶಸ್ವಿಯಾದವು ಮತ್ತು ಇಡೀ ಸರ್ಕಾರಿ ಯಂತ್ರ; ಕೋಟ್ಯಂತರ ರೂ.ಗಳ ಯೋಜನೆಗಳು; ನಮ್ಮ ರಕ್ಷಣಾ ತಂತ್ರಗಳು; ಪೊಲೀಸ್ ವ್ಯವಸ್ಥೆ; ಬೇಹುಗಾರಿಕೆ; ತನಿಖೆ; ವಿಚಾರಣೆ- ಹೀಗೆ ಎಲ್ಲವನ್ನೂ ಅಪಹಾಸ್ಯ ಮಾಡಿದವು. ಮಾಡುತ್ತಲೇ ಇವೆ. ಈ ಎಲ್ಲವುಗಳ ಅಸ್ತಿತ್ವ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿವೆ. ಇದು ಭಯೋತ್ಪಾದಕರ ಶಕ್ತಿ (ಎನ್ನಬೇಕೆ?), ರಾಜ್ಯಶಕ್ತಿ (ಪವರ್ ಆಫ್ ದಿ ಸ್ಟೇಟ್)ಯ ಅಸಮರ್ಥತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ!೨೦೦೫ರಿಂದೀಚೆಗೆ ನಡೆದ ಭಯೋತ್ಪಾದಕ ಘಟನೆಗಳಲ್ಲಿ ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ; ಎಲ್ಲೋ ಒಬ್ಬ ಅಬ್ದುಲ್ ಹಲೀಂನನ್ನು ಬಂಧಿಸಿರುವುದನ್ನು ಬಿಟ್ಟರೆ, ಯಾರೋ ಸೂಟ್‌ಕೇಸ್ ಮಾರಿದವನನ್ನು, ಸೈಕಲ್ ಮಾರಿದ ಅಂಗಡಿ ಮಾಲೀಕರನ್ನು ನಮ್ಮ ಘನವೆತ್ತ ಪೊಲೀಸರು ಹಿಡಿದು ತಂದಿದ್ದಾರೆ. ಅಂಥವರನ್ನಿಟ್ಟುಕೊಂಡು ತನಿಖೆ, ವಿಚಾರಣೆ ನಡೆಯುತ್ತಿದೆ. ಆದರೆ, ಅದರ ಹಿಂದಿರುವ ಮಾಸ್ಟರ್‌ಮೈಂಡ್‌ಗಳು ಎಲ್ಲೋ ಅಡಗಿಕೊಂಡಿದ್ದಾರೆ (ದೊಡ್ಡಣ್ಣ ಅಮೆರಿಕದ್ದೂ ಇದೇ ಸ್ಥಿತಿ! ಅಂದಮೇಲೆ ನಮ್ಮಂಥವರದ್ದು ಯಾವ ಲೆಕ್ಕ?).

ಅವರೇನು ಮಾಡುತ್ತಿದ್ದಾರೆ?:

ಈ ಪರಿಯಾಗಿ ದೇಶವೇ ಭಯದ ದೆವ್ವಗಳ ಮನೆಯಲ್ಲಿ ಹೊಕ್ಕು ಕುಳಿತಿದ್ದರೆ, ನಮ್ಮ ದೇಶದ ಮಹೋನ್ನತ ನಾಯಕರೇನು ಮಾಡುತ್ತಿದ್ದಾರೆ? ಅವರ ಮಾತುಗಳನ್ನು ಕೇಳಿದರೆ, ಅವರಾಡುವುದನ್ನು ನೋಡಿದರೆ ಎಂಥವರಿಗೂ ಅಸಹ್ಯ ಹುಟ್ಟುತ್ತದೆ. ಯಾರಿಗೂ ಭಯೋತ್ಪಾದನೆ ಎಂಬ ಮಹಾಮಾರಿಯನ್ನು ಬಡಿದೋಡಿಸುವ ಬಗ್ಗೆ ಕಾಳಜಿಯೇ ಇಲ್ಲ. ಎಲ್ಲರೂ ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಯಾರಲ್ಲೂ ಮುತ್ಸದ್ದಿತನ ಕಾಣುತ್ತಿಲ್ಲ. ದೂರದೃಷ್ಟಿತ್ಚ ವಿಜೃಂಭಿಸುತ್ತಿಲ್ಲ. ಯಾರೂ ಭಯೋತ್ಪಾದನೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿದ್ದೇವೆ; ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದೇವೆ ಎಂದು ಎದೆತಟ್ಟಿಕೊಂಡು ಹೇಳುವ ಸ್ಥಿತಿಯಲ್ಲಿ ಇಲ್ಲ.

ನಾವು ಮೊದಲೇ ಗುಜರಾತ್ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದೆವು. ಆದರೆ, ಅವರು ನಿರ್ಲಕ್ಷ್ಯ ಮಾಡಿದರು. ಹೀಗಾಗಿ ದುರಂತ ಸಂಭವಿಸಿತು ಎಂದು ಕಾಂಗ್ರೆಸ್ ಮುಖಂಡರು ಹೊಡೆದುಕೊಳ್ಳುತ್ತಿದ್ಧಾರೆ. ನಿಮಗೆ ಮೊದಲೇ ಗೊತ್ತಿದ್ದರೆ ಯಾಕೆ ತಡೆಯಲಿಲ್ಲ? ಯಾಕೆ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲಿಲ್ಲ? ಇಡೀ ಸೇನೆ ನಿಮ್ಮ ಕೈಯಲ್ಲೇ ಇದೆಯಲ್ಲ? ಯಾಕೆ ಸೇನೆಯನ್ನು ನಿಯೋಜನೆ ಮಾಡಲಿಲ್ಲ?

ನಮ್ಮ ಪ್ರಧಾನಿಗಳಿಗೋ ಎಲ್ಲವೂ ಅಮೆರಿಕದ ಮೂಸೆಯಿಂದಲೇ ಬರಬೇಕು. ಈಗಾಗಲೇ ಅವರು ನಮಗೆ ಅಮೆರಿಕನರಂತೆ ಪ್ಯಾಕೇಜ್ಡ್ ಆಹಾರವನ್ನೇ ತಿನ್ನಲು ಕೈ ಹಿಡಿದು ಕಲಿಸಿದ್ದಾರೆ. ಅವರಂತೆ ತಲೆಗೊಂದು ಕಾರು ಇಟ್ಟುಕೊಂಡು ಓಡಾಡಲು ಹೇಳಿಕೊಟ್ಟಿದ್ದಾರೆ. ನಿಮ್ಮ ಜಮೀನನ್ನೆಲ್ಲ ದೊಡ್ಡ ದೊಡ್ಡ ಕಂಪೆನಿಗಳಿಗೆ ಮಾರಿ ಬಿಡಿ; ಆ ಕಂಪೆನಿಗಳವರು ಅಲ್ಲಿ ದೊಡ್ಡ ಯಂತ್ರಗಳನ್ನಿಟ್ಟು ಹೆಚ್ಚು ಬೆಳೆ ತೆಗೆಯುತ್ತಾರೆ; ಯಾಕೆ ಚಿಂತೆ ಮಾಡುತ್ತೀರಿ? ಅವರ ಕೈ ಕೆಳಗೆ ಕೆಲಸ ಮಾಡಿರಿ; ಅವರು ಕೊಟ್ಟ ಸಂಬಳ ತೆಗೆದುಕೊಂಡು ಆರಾಮಾಗಿರಿ ಎಂದು ಹೇಳುತ್ತ- ರೈತರ ಜಮೀನುಗಳನ್ನು ನಿಧಾನಕ್ಕೆ ಒಬ್ಬೊಬ್ಬರೇ ಒಡೆಯರ ಕೈಗೆ ರವಾನಿಸುತ್ತಿದ್ದಾರೆ. ಜಮೀನು ಮಾರಿದ ರೈತರು ತಮ್ಮ ಹೊಲಗಳಲ್ಲಿಯೇ ಬೇರೊಬ್ಬರ ಕೈಯಾಳಾಗಿ ದುಡಿಯಲು ಹೋಗಬೇಕು. ಭಾರತದ ಎಲ್ಲ ಕ್ಷೇತ್ರಗಳಲ್ಲಿಯೂ ವಿದೇಶಿಯರು ಬಂದು ಕೂರಲು ಅನುಕೂಲವಾಗಿದೆ. ಅದಕ್ಕೆ ರತ್ನಗಂಬಳಿ ಹಾಸಿ ಅವರನ್ನೆಲ್ಲ ಕರೆತಂದಿದ್ದಾರೆ. ಪ್ರತಿಯೊಬ್ಬರ ಕೈಗೊಂದು ಪಾನೀಯ ಬಾಟಲು, ನೋಡಲೊಂದು ಟಿ-೨೦ ಕ್ರಿಕೆಟ್ ಮ್ಯಾಚ್ ಕೊಟ್ಟು ಬಿಟ್ಟಿದ್ದಾರೆ.

ಇಂಥ ಪ್ರಧಾನಿಗಳು ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ- ಅಮೆರಿಕದ ಮಾದರಿಯಲ್ಲಿಯೇ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ರಚಿಸಬೇಕು ಎಂದು ಯೋಚಿಸಿದ್ದಾರೆ. ತಮ್ಮ ಮಾದರಿ ದೇಶವಾದ ಅಮೆರಿಕದಲ್ಲಿ ಅಲ್ಲಿನ ಎಫ್‌ಬಿಐಗೆ, ಸೆಪ್ಟೆಂಬರ್ ೧೧, ೨೦೦೧ರ ಭಯೋತ್ಪಾದಕ ಘಟನೆಯ ಮಾಸ್ಟರ್‌ಮೈಂಡ್ ಒಸಾಮಾ ಬಿನ್ ಲ್ಯಾಡೆನ್ ಇದುವರೆಗೂ ಸಿಕ್ಕಿಲ್ಲ. ಅದು ಕಣ್ಣ ಮುಂದಿದ್ದರೂ ಅವರು ಈ ಚಿಂತನೆ ನಡೆಸಿದ್ದಾರೆ.ವಿಶ್ವದಲ್ಲಿ ಎಲ್ಲೆಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆಯೋ ಅಲ್ಲೆಲ್ಲ- ಈ ಭಯೋತ್ಪಾದನೆಗೆ ಕಾರಣವೇನು? ಎಂದು ಹುಡುಕುತ್ತಾ ಹೋದರೆ- ಒಂದು ಜನಾಂಗದ ಹತಾಶೆಯೇ ಮುಖ್ಯ ಕಾರಣ ಎಂಬುದು ಸಿದ್ಧವಾಗುತ್ತದೆ. ಈ ಹತಾಶೆಗೆ ಐತಿಹಾಸಿಕ ಕಾರಣವಿದೆ.

ಹಿಂದೆಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಕಾರಣಗಳಿಂದ ವಿಶ್ವದ ಎರಡು ಪ್ರಮುಖ ಧರ್ಮಗಳಲ್ಲಿ- ಒಂದು ಇನ್ನೊಂದನ್ನು ಮೂಲೆಗೊತ್ತುತ್ತ ಬಂದಿತು. ಹೀಗೆ ಮೂಲೆಗೊತ್ತಿ ಆ ಧರ್ಮೀಯರನ್ನು ಸಂಪೂರ್ಣ ಮೂಲೆಗುಂಪು ಮಾಡಲು ಆ ಇನ್ನೊಂದು ದೊಡ್ಡ ಧರ್ಮಕ್ಕೆ ಸಾಧ್ಯವಾಗಲಿಲ್ಲ. ಹಾಗೆ ಮೂಲೆಗೆ ತಳ್ಳಲ್ಪಟ್ಟವರಿಗೆ ಅಲ್ಲಿ ಕುಡಿಯಲು ನೀರು ಸಿಗದಿದ್ದರೂ ತೈಲ ಬಾವಿಗಳು ಸಿಕ್ಕವು. ಚಿನ್ನದ ಗಣಿಯೇ ಸಿಕ್ಕಂತಾಯಿತು. ತೈಲದ ಹರಿವಿನಿಂದ ಝಣಝಣದ ರೂಪಾಯಿ ಕುಣಿಯತೊಡಗಿತು. ಅದರಿಂದ ಎಲ್ಲವನ್ನೂ ಕೊಂಡು ಕೊಳ್ಳತೊಡಗಿದರು. ಆದರೆ, ಅಮೆರಿಕದಂಥ ದುಷ್ಟ ದೇಶಗಳು ಆ ತೈಲದ ಮೇಲೆ ಕೆಂಗಣ್ಣು ಬೀರಿದವು. ಶೀತಲ ಯುದ್ಧಗಳು ನಡೆದವು. ಶೋಷಣೆ ಮುಂದುವರಿಯಿತು. ತೈಲದ ರಾಜಕೀಯದಲ್ಲಿ ಕ್ರೌರ್ಯ ಮೆರೆಯಿತೇ ಹೊರತು ಮಾನವೀಯತೆಯಲ್ಲ. ಎಲ್ಲೋ ದೂರದಲ್ಲಿ ಕುಳಿತು ತಮ್ಮ ಸುಖಕ್ಕಾಗಿ ಇನ್ನೆಲ್ಲಿಯೋ ಮರಳುಗಾಡಿನಲ್ಲಿ ಇರುವವರನ್ನು ಶೋಷಿಸಲು ಅಮೆರಿಕದಂಥ ದೇಶಗಳು ಹಿಂದೆ ನೋಡಲಿಲ್ಲ. (ಸಾಲದ್ದಕ್ಕೆ ಇನ್ನೊಂದು ಕಡೆಯಲ್ಲಿ ಬ್ರಿಟಿಷ್‌ರಂತವರು ವಿಶ್ವದ ಬಹುತೇಕ ದೇಶಗಳ ಮೇಲೆ ತಮ್ಮ ಸಾರ್ವಭೌಮತ್ವ ಸ್ಥಾಪಿಸಿ, ಸ್ಥಳೀಯರ ಹಕ್ಕುಗಳ ಮೇಲೆ ಹದ್ದಾಗಿ ಕುಕ್ಕಿದರು. ಸ್ವಾತಂತ್ರ್ಯ ಕಸಿದರು).

ತೈಲ ದೇಶಗಳ ಮೇಲಿನ ಹಿಡಿತ ಸಾಧಿಸುವ ಹಠಕ್ಕೆ ಬಿದ್ದು, ಅಮೆರಿಕ ಸಾಕಷ್ಟು ತಪ್ಪುಗಳನ್ನು ಮಾಡತೊಡಗಿತು. ಕುವೈತ್ ಯುದ್ಧ, ಇರಾಕ್ ಯುದ್ಧ, ಸದ್ದಾಂ ಗಲ್ಲು- ಇವು ಕೆಲವು ಉದಾಹರಣೆಗಳು ಮಾತ್ರ. ಪ್ರಜಾಪ್ರಭುತ್ವ ಸ್ಥಾಪಿಸುವ ನೆಪದಲ್ಲಿ ಏನೆಲ್ಲ ಮಾಡಿತು. ಈಗಲೂ ಮಾಡುತ್ತಿದೆ.

ಹೀಗಾಗಿ ಅಸಹಾಯಕತೆ, ಹತಾಶೆಗಳು- ಸಿಟ್ಟು, ಆಕ್ರೋಶದ ರೂಪದಲ್ಲಿ ಮಡುಗಟ್ಟಿದವು. ಅಮೆರಿಕವನ್ನು ಎದುರಿಸಲು ಒಸಾಮಾ ಬಿನ್ ಲ್ಯಾಡೆನ್‌ನಂಥ ಧಾರ್ಮಿಕ ಮೂಲಭೂತವಾದಿಗಳು ಜನ್ಮ ತಾಳಿದರು. ಅವರ ಸಂಖ್ಯೆ ಎಲ್ಲೆಡೆಯೂ ವ್ಯಾಪಕವಾಗಿ ಹಬ್ಬಿತು. ಯಾರ್‍ಯಾರು ಅಮೆರಿಕದ ನೀತಿಯನ್ನು ಪಾಲಿಸುತ್ತಾರೋ ಅಂಥ ದೇಶಗಳನ್ನು ಗುರಿಯಾಗಿಟ್ಟುಕೊಂಡು ಜೆಹಾದಿ ಸಂಘಟನೆಗಳು ಹುಟ್ಟಿಕೊಂಡವು. ಕಣ್ಣು ಮುಚ್ಚಿಕೊಂಡು ಜಾಗತೀಕರಣಕ್ಕೆ ತನ್ನನ್ನು ಒಡ್ಡಿಕೊಂಡು, ೧೯೯೨ರಿಂದೀಚೆ ಅಮೆರಿಕವನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುವಂತೆ ಮಾಡಿದ ಅಂದಿನ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್, ವಿತ್ತ ಸಚಿವ ಮತ್ತು ಇಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರಂಥವರ ತಪ್ಪು ನೀತಿಗಳಿಂದಾಗಿ ಭಯೋತ್ಪಾದನೆಯ ಕೂಪದಲ್ಲಿ ನಮ್ಮ ದೇಶ ಸಿಕ್ಕಿ ನಲುಗುವಂತಾಯಿತು. ಈಗ ಇನ್ನಷ್ಟು ಅಮೆರಿಕಮಯವಾಗಿರುವ ಭಾರತದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ದೇಶದಲ್ಲೆಲ್ಲ ಜಾರ್ಜ್ ಬುಷ್‌ನ ಕರಾಳ ಮುಖವೇ ಕಾಣುತ್ತಿದೆ! ಹೀಗಾಗಿ ದೇಶ ಇನ್ನೂ ನಲುಗಲಿದೆ ಎಂಬುದು ಸುಳ್ಳಲ್ಲ.

ಅಸಮ ಹಂಚಿಕೆ:

’ಗೋಳಿಕರಣ’ (ಗ್ಲೋಬಲೈಜೇಷನ್)ದಿಂದ ಭಯೋತ್ಪಾದನೆ ಇನ್ನಷ್ಟು ಹೆಚ್ಚುತ್ತಿದೆ. ಜಾಗತೀಕರಣದಿಂದಾಗಿ ಅತ್ಯಂತ ಕೊರತೆ ಇರುವ ಸಂಪನ್ಮೂಲಗಳ ಅಸಮ ವಿತರಣೆಯಾಗುತ್ತಿದೆ. ಭಯಂಕರ ಆರ್ಥಿಕ ಅಸಮಾನತೆ ಸೃಷ್ಟಿಯಾಗುತ್ತಿದೆ. ಹೀಗಾಗಿ, ಲಿಚ್ಬಾಕ್ ಎಂಬ ಸಮಾಜ ವಿಜ್ಞಾನಿ ಹೇಳುವಂತೆ ’ಇನ್‌ಇಕ್ವಾಲಿಟಿಯಿಂದ ಪಾಲಿಟಿಕಲ್ ಕಾನ್‌ಫ್ಲಿಕ್ಟ್’ ಹುಟ್ಟಿಕೊಳ್ಳುತ್ತಿದೆ. ಪರಿಣಾಮವಾಗಿ ಬದುಕುವ ಆಶಾಕಿರಣಗಳು ನೀರ ಮೇಲಿನ ಗುಳ್ಳೆಗಳಾಗುತ್ತಿವೆ. ಭಯೋತ್ಪಾದಕರಿಗೆ ಜಾತಿ ಇಲ್ಲ; ಧರ್ಮವಿಲ್ಲ ಎಂದು ನಮ್ಮ ಪಾಲಸಿ ಮೇಕರ್‌ಗಳು ಹೇಳುತ್ತಲೇ ಬರುತ್ತಿದ್ದಾರೆ ಮತ್ತು ಜನರ ಕಣ್ಣಿಗೆ ಮಣ್ಣೆರಚುತ್ತಲೇ ಇದ್ದಾರೆ.

ಈಗ ೧೭ ವರ್ಷಗಳ ಹಿಂದೆ ಮೇ ೨೧ರಂದು ದಿವಂಗತ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಭಯೋತ್ಪಾದಕರನ್ನು ಹೊರತು ಪಡಿಸಿದರೆ, ನಮ್ಮ ದೇಶದಲ್ಲಿ ಭಯೋತ್ಪಾದನೆ ನಡೆದಿರುವುದು ಧಾರ್ಮಿಕ ಕಾರಣದಿಂದಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ರಾಜೀವ್ ಹಂತಕರು ಮಾತ್ರ ಧಾರ್ಮಿಕ ಕಾರಣಕ್ಕಾಗಿ ಭಯೋತ್ಪಾದನೆಗೆ ಇಳಿದಿರಲಿಲ್ಲ. ಅವರಲ್ಲಿ ಕೇವಲ ಸೇಡಿನ ಭಾವನೆಯಿತ್ತು. ಸೇಡು ತೀರಿಸಿಕೊಳ್ಳಲಿಕ್ಕಾಗಿ ಆತ್ಮಹತ್ಯಾ ದಳದವರು ರಾಜೀವ್‌ರ ಬಲಿ ತೆಗೆದುಕೊಂಡರು. ಆದರೆ, ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದ್ದು ಕೂಡ ಧಾರ್ಮಿಕ ಭಯೋತ್ಪಾದನೆಯೇ. ಇಷ್ಟೆಲ್ಲಾ ಉದಾಹರಣೆಗಳಿದ್ದರೂ ನಮ್ಮ ನಾಯಕರು ಭಯೋತ್ಪಾದಕರಿಗೆ ಧರ್ಮವಿಲ್ಲ; ಜಾತಿಯಿಲ್ಲ ಎಂದು ಬೊಗಳೆ ಬಿಡುತ್ತಾ ತಮ್ಮ ಪೊಳ್ಳು ಜಾತ್ಯತೀತತೆ ಪ್ರದರ್ಶನ ಮಾಡುತ್ತಾರೆ. ಈಗ ನಮ್ಮ ದೇಶದಲ್ಲಿ ಮತ್ತು ವಿಶ್ವದ ಬಹುತೇಕ ಕಡೆಗಳಲ್ಲಿ ನಡೆಯುತ್ತಿರುವುದು ಧಾರ್ಮಿಕ ಭಯೋತ್ಪಾದನೆ ಎಂಬುದು ಸೂರ್ಯನಷ್ಟೇ ಸತ್ಯ. ಧಾರ್ಮಿಕ ಭಯೋತ್ಪಾದನೆಯನ್ನು ತಡೆಯಬೇಕೆಂದರೆ ಮೊಟ್ಟ ಮೊದಲನೆಯದಾಗಿ ಪಶ್ಚಿಮ ದೇಶಗಳ ನೀತಿಯನ್ನು- ಅದರಲ್ಲೂ ಅಮೆರಿಕದ ಹಿಂಬಾಲಕರಾಗಿ ಹೋಗುವುದನ್ನು ನಮ್ಮ ದೇಶದ ಘನತೆವೆತ್ತ ನಾಯಕರು ಬಿಡಬೇಕು. ನಮ್ಮನ್ನು ನಾವೇ ಆರಿಸಿದ ಸರ್ಕಾರಗಳು ಆಳಬೇಕೆ ಹೊರತು, ಖಾಸಗಿ ಧಣಿಗಳಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಸಂಪತ್ತಿನ ಅಸಮಾನ ಹಂಚಿಕೆ ತಡೆಯಬೇಕು. ಸಂಪತ್ತು ಸಮಾಜದ ಸ್ವತ್ತಾಗಬೇಕು. ಅದು ಯಾವುದೇ ಒಬ್ಬ ವ್ಯಕ್ತಿಯ ಅಡಿಯಾಳಾಗಬಾರದು. ಕಾನೂನುಗಳು ಯಾವುದೇ ಧರ್ಮ ಗ್ರಂಥಗಳು, ಜಾತಿಯ ’ಕೋಡ್’ಗಳನ್ನು ಆಧರಿಸಿರಬಾರದು. ಎಲ್ಲರಿಗೂ ಒಂದೇ ಕಾನೂನು, ಎಲ್ಲರಿಗೂ ಒಂದೇ ನ್ಯಾಯ- ಎಂಬ ತತ್ವ ಜಾರಿಗೆ ಬರಬೇಕು. ಸಮಾನತೆ ಏಕಮಂತ್ರವಾಗಬೇಕು. ಸಮಬಾಳು ಎಲ್ಲರಿಗೂ ಸಿಗಬೇಕು. ಈ ದೇಶದಲ್ಲಿ ಹೀಗೆಂದಾದರೂ ಆಗಲು ಸಾಧ್ಯವೇ? (ಖಾಸಗಿ ವ್ಯಕ್ತಿಗಳ ಹಣದಿಂದ ಸಂಸತ್ತನ್ನೇ ಖರೀದಿಸಿ ಮೆರೆಯುತ್ತಿರುವ ಕಿಂಗ್ ಸಿಂಗ್‌ರ ದುಷ್ಟ ನೀತಿಗಳು ಮುಂದುವರಿದದ್ದೇ ಆದರೆ, ಇದು ಎಂದೆಂದಿಗೂ ಸಾಧ್ಯವಿಲ್ಲ!) ಸಾಧ್ಯವಿಲ್ಲದಿದ್ದರೆ ಭಯೋತ್ಪಾದನೆಗೆ ಸದ್ಯೋಭವಿಷ್ಯದಲ್ಲಿ ಯಾವುದೇ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ನನಗೆಲ್ಲೂ ಕಾಣಿಸುತ್ತಿಲ್ಲ.
* * * * * *

No comments:

Post a Comment