Monday, February 16, 2009

ಇಂದಿನ ಪತ್ರಿಕೋದ್ಯಮ: ಕೆಲವು ಟಿಪ್ಪಣಿಗಳು

ಇಂದಿನ ಪತ್ರಿಕೋದ್ಯಮ: ಒಂದಷ್ಟು ಟಿಪ್ಪಣಿಗಳು

ದೇಶದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಂತರ ನಾಲ್ಕನೇ ಅಂಗ (ಫೋರ್ತ್ ಎಸ್ಟೇಟ್) ಎಂದು ಪತ್ರಿಕೋದ್ಯಮವನ್ನು ಕರೆಯಲಾಗುತ್ತದೆ. ಅಂಥ ದೊಡ್ಡ ಘನತೆ ಮತ್ತು ಜವಾಬ್ದಾರಿ ಪತ್ರಿಕೋದ್ಯಮಕ್ಕೆ ಇದೆ. ವಿಶ್ವದ ಪತ್ರಿಕೋದ್ಯಮಕ್ಕೆ ಸುಮಾರು ೩೦೦ ವರ್ಷಗಳ ಇತಿಹಾಸ ಇದೆ. ೧೮ನೇ ಶತಮಾನದಲ್ಲಿ ಜೇಮ್ಸ್ ಅಗಸ್ಟಸ್ ಹಿಕ್ಕಿ ಎಂಬಾತನು ಆರಂಭಿಸಿದ ’ದಿ ಬೆಂಗಾಲ್ ಜನರಲ್ ಅಡ್ವರ್ಟೈಸರ್’ ಅಥವಾ ’ಹಿಕ್ಕೀಸ್ ಗೆಜೆಟ್’ ಎಂಬ ಪತ್ರಿಕೆಯ ಮೂಲಕ ಈ ದೇಶದ ಪತ್ರಿಕೋದ್ಯಮ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಸಾಗಿ ಬಂದ ಪತ್ರಿಕೋದ್ಯಮದ ಇತಿಹಾಸ ಬಲು ವಿಶಾಲವಾದುದು.

ಇಂಥ ವಿಶಾಲ ಪತ್ರಿಕೋದ್ಯಮದ ಒಟ್ಟಾರೆ ಒಳಹರಿವು (ಅಂಡರ್ ಕರೆಂಟ್) ಎಂದರೆ, ಜನಹಿತವೇ ಆಗಿದೆ. ’ಬಹುಜನ ಹಿತಾಯ; ಬಹುಜನ ಸುಖಾಯ’ ಎಂಬುದು ಪತ್ರಿಕೋದ್ಯಮದ ಮೂಲ ಮಂತ್ರ- ಎಂಬುದು ನನ್ನ ಭಾವನೆ. ಜನರಿಗೆ ಅತ್ಯಂತ ನಿಖರವಾದ, ಸಮಾಜಕ್ಕೆ ಒಳ್ಳೆಯದಾಗುವ ಮಾಹಿತಿಯನ್ನು ನೀಡುವುದು ಪತ್ರಿಕೋದ್ಯಮದ ಮುಖ್ಯ ಗುರಿ ಎಂದು ನಾನು ಭಾವಿಸಿದ್ದೇನೆ.

ಸ್ವತಂತ್ರ ಪೂರ್ವದಲ್ಲಿ ಪತ್ರಿಕೆಗಳು ನಮ್ಮ ದೇಶದ ಸ್ವಾತಂತ್ರ್ಯ ಗಳಿಸುವುದನ್ನೇ ತಮ್ಮ ಧ್ಯೇಯವನ್ನಾಗಿಸಿಕೊಂಡಿದ್ದವು. ಸತ್ಯ ಮತ್ತು ನಿಖರತೆಯಿಂದ ಅವುಗಳು ಅಪ್ಪಟ ಚಿನ್ನದಂತೆ ಕಂಗೊಳಿಸುತ್ತಿದ್ದವು. ಸ್ವಾತಂತ್ರ್ಯಾನಂತರ ನಾಲ್ಕನೇ ಎಸ್ಟೇಟ್‌ನ ಕೆಲಸವನ್ನು ನಿರ್ವಹಿಸುತ್ತಾ, ಆಳುವವರನ್ನು ತಿದ್ದುವ, ಉತ್ತಮ ಆಡಳಿತ ನೀಡಲು, ಜನರ ಹಿತ ಕಾಪಾಡಲು ಬದ್ಧವಾಗಿದ್ದವು ಮತ್ತು ತಮ್ಮ ಬದ್ಧತೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತಿದ್ದವು.

ಪತ್ರಿಕೋದ್ಯಮ ಇಂದು ಕವಲು ಹಾದಿಯಲ್ಲಿದೆ ಎಂದು ಹೇಳಿದರೆ ಅದು ತುಂಬ ಹಳೆಯ ಮಾತಾಗುತ್ತದೆ. ಆಗಲೇ ಪತ್ರಿಕೋದ್ಯಮ ಯಾವುದೇ ಕಾಣದ ದಾರಿಯಲ್ಲಿ ತನ್ನ ಕಣ್ಣಿಗೆ ಪಟ್ಟಿಕೊಂಡು ಪಯಣ ಹೊರಟುಬಿಟ್ಟಿದೆ.

ಪತ್ರಿಕೋದ್ಯಮ ಜನ ಕೇಂದ್ರಿತವಾಗಿತ್ತು. ಜನರ ಬೇಕು ಬೇಡಗಳಿಗೆ ಸ್ಪಂದಿಸುತ್ತಿತ್ತು. ಅದಕ್ಕೆ ಬೇಕಾದ ಅಧ್ಯಯನಶೀಲತೆ, ಅಚ್ಚುಕಟ್ಟುತನ, ತಮ್ಮ ವೈಯಕ್ತಿಕ ಬದ್ಧತೆಯಲ್ಲಿ ಎಳ್ಳಷ್ಟೂ ದೋಷವಿಲ್ಲದಿರುವುದು ಎದ್ದು ಕಾಣುತ್ತಿತ್ತು. ಅಲ್ಲಿಂದ ಮುಂದಕ್ಕೆ ಕಳೆದ ಎರಡು ದಶಕಗಳಲ್ಲಿ ಕತ್ತಲೆಯ ದಾರಿಯಲ್ಲಿ ಸಾಗಿದೆ. ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅದಕ್ಕೇ ಗೊತ್ತಿಲ್ಲ.

ಇದು ಮಾಹಿತಿ ಯುಗ: ಇನ್‌ಫರ್‌ಮೇಷನ್ ಎಕ್ಸ್‌ಪ್ಲೋಷನ್ ಆಗಿದೆ. ಆಗುತ್ತಲೇ ಇದೆ. ಮಾಹಿತಿಯನ್ನು ವ್ಯಾಪಕವಾಗಿ ಪಡೆಯಬಹುದು. ಕಂಪ್ಯೂಟರ್‌ನ ಒಂದು ಕೀಲಿಮಣೆಯ ಮೇಲೆ ಕೈಯಾಡಿಸಿದರೆ ಸಾಕು ಬೇಕಾದ ಮಾಹಿತಿ ದಕ್ಕುತ್ತದೆ. ಅಂತಹ ಕಾಲದಲ್ಲಿ ನಾವಿದ್ದೇವೆ. ’ಇನ್‌ಫರ್‍ಮೇಷನ್ ಈಸ್ ಪವರ್’ ಎಂದೇ ಹೇಳಲಾಗುತ್ತಿದೆ.

ಆದರೆ, ಪತ್ರಿಕೋದ್ಯಮ ಅಥವಾ ಎಲ್ಲವನ್ನೂ ಒಳಗೊಂಡಂತೆ ಹೇಳಬೇಕಾದರೆ, ಮಾಧ್ಯಮ- ಮೀಡಿಯಾ ಇಂದು ನಾವಿಕನಿಲ್ಲದ ಹಡಗಿನಂತಾಗಿದೆ. ಏನಾದರೂ ಗುರಿ ಇದೆಯೇ ಎಂದು ನೋಡಿದರೆ, ಲಾಭ ಗಳಿಸುವುದೊಂದೇ ಗುರಿ ಎಂಬುದು ಎದ್ದು ಕಾಣುತ್ತಿದೆ. ಅದಕ್ಕೇ ಇಷ್ಟೆಲ್ಲ ಸ್ಪರ್ಧೆ. ಅದಕ್ಕಾಗಿಯೇ ಇಷ್ಟೊಂದು ಸಾಹಸಗಳನ್ನು ಮಾಡಬೇಕಾಗಿ ಬಂದಿದೆ.

ಇನ್ನು ಸದ್ಯದ ಪತ್ರಿಕೋದ್ಯಮದ ಕುರಿತಂತೆ ಒಳ್ಳೆಯ ಮಾತುಗಳನ್ನು ಹೇಳಬೇಕೆಂದರೆ, ಪತ್ರಿಕೆಗಳು ಹೆಚ್ಚೆಚ್ಚು ಸುಂದರವಾಗಿವೆ. ಅವುಗಳ ಬೆಲೆಗಳು ಕಡಿಮೆಯಾಗಿವೆ. ಹಳ್ಳಿಯ ಜನರೂ ಕೊಂಡು ಪತ್ರಿಕೆಗಳನ್ನು ಓದುವ ಸ್ಥಿತಿ ನಿರ್ಮಾಣವಾಗಿದೆ. ಅವುಗಳ ಪೇಜುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ.

ಒಟ್ಟಾರೆ ಮಾಧ್ಯಮಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಬೇಕೆಂದರೆ, ಪ್ರತಿಯೊಬ್ಬ ಜನ ಸಾಮಾನ್ಯನನ್ನು ತಲುಪುವಲ್ಲಿ ಅವುಗಳು ಯಶಸ್ವಿಯಾಗಿವೆ. ಮಾಹಿತಿ, ಮನರಂಜನೆ, ಶಿಕ್ಷಣ- ಇತ್ಯಾದಿಗಳನ್ನು ನೀಡುವಲ್ಲಿ ನಾ ಮುಂದು ನೀ ಮುಂದು ಎಂದು ಓಡೋಡಿ ಹೋಗುತ್ತಿವೆ.

ಆದರೆ, ಮಾರುಕಟ್ಟೆ ಹಿಡಿತಕ್ಕೆ ಎಲ್ಲ ಕ್ಷೇತ್ರಗಳು ಸಿಕ್ಕಿಕೊಂಡ ಹಾಗೆಯೇ ಪತ್ರಿಕೋದ್ಯಮವೂ ಸಿಕ್ಕಿಕೊಂಡು ಬಿಟ್ಟಿದೆ. ಟೂತ್ ಪೇಸ್ಟ್, ಟಾಯ್ಲೆಟ್ ಸೋಪ್, ಶೇವಿಂಗ್ ಕ್ರೀಮ್-ನಂತಹ ’ಫಾಸ್ಟ್ ಮೂವಿಂಗ್ ಕಂಸುಮರ್ ಗೂಡ್ಸ್’ನಂತೆ ಪತ್ರಿಕೋದ್ಯಮವೂ ಆಗಿಬಿಟ್ಟಿದೆ.

ಒಟ್ಟಾರೆ ಪತ್ರಿಕೋದ್ಯಮವನ್ನು ಗಮನಕ್ಕೆ ತೆಗೆದುಕೊಂಡರೆ, ಆಳುವವರ ಮತ್ತು ಬಂಡವಾಳಶಾಹಿಗಳ ಮುಖವಾಣಿಗಳಾಗಿ ಪತ್ರಿಕೆಗಳು/ ಮಾಧ್ಯಮಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಅವರು ತಯಾರು ಮಾಡಿದ ಬಣ್ಣ ಬಣ್ಣದ ಹೊಸ ಹೊಸ ಗೂಡ್ಸ್‌ಗಳನ್ನು ಗ್ರಾಹಕರ ಡ್ರಾಯಿಂಗ್ ರೂಮಿನೊಳಕ್ಕೆ ತೆಗೆದುಕೊಂಡು ಹೋಗುವ ಹೆದ್ದಾರಿಗಳೆಂದರೆ ಈ ಮಾಧ್ಯಮಗಳು ಮಾತ್ರ. ಮುದ್ರಣ ಮಾಧ್ಯಮವೂ ಸೇರಿದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು, ಹೈಟೆಕ್ ಆದ ಇಂಟರ್‌ನೆಟ್ ಮಾಧ್ಯಮವೂ ಸೇರಿದಂತೆ ಎಲ್ಲ ಮಾಧ್ಯಮಗಳು ಈ ಕೆಲಸವನ್ನು ಚಾಚು ತಪ್ಪದಂತೆ ಮಾಡುತ್ತಿವೆ. ಇದಕ್ಕೆಲ್ಲ ಕಾರಣವೆಂದರೆ ಮಾರುಕಟ್ಟೆ ಕೇಂದ್ರಿತ ವ್ಯಾಪಾರಿ ವ್ಯವಸ್ಥೆಯೇ ಆಗಿದೆ.

ಇಡೀ ಬದುಕು ವ್ಯಾಪಾರೀಕರಣಗೊಂಡ ಇಂದಿನ ಸಮಾಜದಲ್ಲಿ ಸಂಪೂರ್ಣ ಅಸಮಾನತೆ ತಾಂಡವವಾಡುತ್ತಿದೆ. ಈ ಕಾರಣದಿಂದಾಗಿ ಮನುಷ್ಯ ಇಂದು ಸಂಪೂರ್ಣವಾಗಿ ಯಂತ್ರದಂತಾಗಿದ್ದಾನೆ. ಅವನ ಹಾವಭಾವಗಳು, ನಗು, ವಿದ್ಯೆ, ವಿನಯ, ವಿಧೇಯತನ, ಕೌಶಲಗಳು, ಬುದ್ಧಿಶಕ್ತಿ- ಎಲ್ಲವನ್ನು ವಿನಿಯೋಗಿಸುತ್ತ, ಅವುಗಳನ್ನೆಲ್ಲ ಬಂಡವಾಳಶಾಹಿ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾನೆ. ನಕ್ಕರೂ, ಕೈ ಮುಗಿದರೂ, ವಿಧೇಯತನ ತೋರಿಸಿದರೂ, ಕೆಲಸ ಮಾಡಿದರೂ ಲಾಭವಾಗಬೇಕು- ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮನುಷ್ಯನೂ ಯಂತ್ರದಂತೆ ಹಗಲಿರುಳು ಬಳಕೆಯಾಗುತ್ತಿದ್ದಾನೆ.

ಇಂಥ ಪರಿಸ್ಥಿತಿ ಇರುವಾಗ ಪತ್ರಿಕೋದ್ಯಮದಂಥ ಪ್ರಮುಖ ಅಂಗವೊಂದು ಗ್ಲೋಬಲ್ ಪಾಲಿಟಿಕ್ಸ್‌ನ ಒಂದು ಭಾಗವಾಗಿ, ಅದರ ಕೈಗೊಂಬೆಯಾಗಿ ಹೋಗಿದೆ ಮತ್ತು ಗ್ಲೋಬಲ್ ಪಾಲಿಟಿಕ್ಸ್ ಅನ್ನು ಪ್ರೂವ್ ಮಾಡುವ ಅಂಗವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಮೊದಲು ಪತ್ರಿಕೋದ್ಯಮ ಜನ ಕೇಂದ್ರಿತವಾಗಿತ್ತು. ಇಂದು ಅದರ ಬದಲಾಗಿ ’ಶಕ್ತಿ’ ಕೇಂದ್ರಿತವಾಗಿದೆ. ಯಾವುದೇ ಒಂದು ಪರ್ಟಿಕ್ಯುಲರ್ ಇಂಟರೆಸ್ಟ್ ಅನ್ನು ಬಿಂಬಿಸುವತ್ತ ವಾಲಿದ್ದು, ಅಲ್ಲಿ ಬಹುಜನ ಹಿತಾಯ; ಬಹುಜನ ಸುಖಾಯ (ಇಲ್ಲಿ ಬಹುಜನ ಎಂದರೆ, ಬಹುಜನ ಸಮಾಜ ಪಾರ್ಟಿ ಅಲ್ಲ ಎಂಬುದು ನೆನಪಿರಲಿ) ಎಂಬುದು ಸಂಪೂರ್ಣವಾಗಿ ಮಾಯವಾಗಿದೆ.

ಸಮಗ್ರತೆ ಎಂಬುದು ಇಂದಿನ ಮಾಧ್ಯಮದಲ್ಲಿ ಹೋಗಿಯೇ ಬಿಟ್ಟಿದೆ. ಇಂದಿನ ಮಾಧ್ಯಮ ಯಾವುದನ್ನೂ ಸಮಗ್ರವಾಗಿ ನೋಡುವುದಿಲ್ಲ. ಪೆಟ್ರೋಲ್, ಡೀಸಲ್ ಬೆಲೆಗಳನ್ನೇ ತೆಗೆದುಕೊಂಡರೆ, ’ಇಡೀ ಜಗತ್ತು ಪೆಟ್ರೋಲ್ ಮೇಲೆಯೇ ಯಾಕೆ ನಿಂತಿರಬೇಕು?’ ಎಂದು ಯಾರೂ ಯೋಚಿಸುವುದಿಲ್ಲ. ಅಥವಾ ಹಾಗೆ ಯಾರಾದರೂ ಯೋಚನೆ ಮಾಡಿದಲ್ಲಿ, ಮತ್ತದನ್ನು ಬರೆದಲ್ಲಿ, ಎಲ್ಲಿಯೋ ಮೂಲೆಯಲ್ಲಿ ಮೂರು ಪ್ಯಾರಾ ಪ್ರಕಟಿಸಿ ಕೈ ತೊಳೆದುಕೊಳ್ಳಲಾಗುತ್ತದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ೪೦ ಜನ ರೈತರು ಆತ್ಯಹತ್ಯೆ ಮಾಡಿಕೊಂಡರು- ಎಂದು ವರದಿ ಮಾಡಲಾಗುತ್ತದೆಯೇ ಹೊರತು, ಕಳೆದ ೧೦ ವರ್ಷಗಳ ಅವಧಿಯಲ್ಲಿ ೧ ಲಕ್ಷ ೭೫ ಸಾವಿರದಷ್ಟು ರೈತರು ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ಮೂಲ ಮತ್ತು ಮುಖ್ಯವಾದ ಕಾರಣ ೧೯೯೦ರಿಂದಲೇ ದೇಶವು ಅನುಸರಿಸಿಕೊಂಡು ಬರುತ್ತಿರುವ ಉದಾರೀಕರಣ ನೀತಿಗಳೇ ಆಗಿದೆ ಎಂಬುದರ ಬಗ್ಗೆ ಪಿ. ಸಾಯಿನಾಥ್‌ರಂಥ ಕೆಲವೇ ಕೆಲವು ಪತ್ರಕರ್ತರನ್ನು ಬಿಟ್ಟರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ನಮ್ಮ ಫೋರ್ತ್ ಎಸ್ಟೇಟ್- ಹೀಗೆ, ಒಂದು ವಿಚಾರವನ್ನು ಸಮಗ್ರವಾಗಿ ನೋಡುವ ಬದಲಾಗಿ, ಪ್ರತಿಯೊಂದು ಅಂಶವನ್ನು ಒಡೆದು ಒಡೆದು ನೋಡುತ್ತಿದೆ. ಸಮಗ್ರವಾಗಿ ನೋಡುವ ಬದಲಾಗಿ ಒಡೆದು ಒಡೆದು ನೋಡಿದಾಗ ದಿಕ್ಕು ತಪ್ಪಿ ಬಿಡುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಏನು ಹೇಳುತ್ತವೆಯೋ ಅದನ್ನೇ ನಾವುಗಳು ಬೇರೆ ಬೇರೆ ರೂಪದಲ್ಲಿ ಪ್ರಚಾರ ಮಾಡುತ್ತಿರುತ್ತವೆ. ಉದಾಹರಣೆಗೆ ಈಗ ನ್ಯೂಕ್ಲಿಯರ್ ಒಪ್ಪಂದದ ವಿಚಾರದಲ್ಲಿ ಇದೇ ಆಗುತ್ತಿರುವುದು!

ನ್ಯೂಕ್ಲಿಯರ್ ಎನರ್ಜಿಯನ್ನು ಅಮೆರಿಕದಿಂದ ಪಡೆದುಕೊಂಡರೆ ಒಳ್ಳೆಯದೋ? ಫ್ರಾನ್ಸ್‌ನಿಂದ ಪಡೆದರೆ ಒಳ್ಳೆಯದೋ? ನ್ಯೂಕ್ಲಿಯರ್ ಎನರ್ಜಿ ಬೇಕೆ? ಬೇಡವೇ? ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡರೆ, ದೇಶಕ್ಕೆ ಏನು ಲಾಭ? ಎಷ್ಟು ಲಾಭ? ಎಂಬಂಥ ರೀತಿಯಲ್ಲಿ ಪ್ರತಿಯೊಂದು ಪ್ರಶ್ನೆಯನ್ನು ಕೇಳಿ- ಅದಕ್ಕೆ ಬಂದ ಮತ್ತು ಆಯ್ದ ವಿಚಾರಗಳನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತದೆ. ಇಡೀ ಮಾಧ್ಯಮ ಕ್ಷೇತ್ರವನ್ನು ಕಾಣದ ಕೈಗಳು ಎಲ್ಲಿಂದಲೋ ಕಂಟ್ರೋಲ್ ಮಾಡುತ್ತಿರುವುದು ಎದ್ದು ಕಾಣುತ್ತದೆ.

ಗ್ಲೋಬಲ್ ಪಾಲಿಟಿಕ್ಸ್‌ನ ಒಂದು ಭಾಗವಾಗಿ, ಅದರ ದಾಳವಾಗಿ, ಅದು ನಡೆಸುವ ಆಟದ ಕಾಯಿಯಾಗಿ ಫೋರ್ತ್ ಎಸ್ಟೇಟ್ ತುಂಬ ಚೆನ್ನಾಗಿ ಬಳಕೆಯಾಗುತ್ತಿದೆ. ಅಮೆರಿಕ, ಇಂಗ್ಲೆಂಡ್‌ನ ಸುದ್ದಿಗಳು ನಮ್ಮಲ್ಲಿ ಬಂದಷ್ಟು ನಾರ್ವೆ, ಜಪಾನ್, ಅರಬ್ ದೇಶಗಳ ಸುದ್ದಿಗಳು ಪ್ರಕಟವಾಗುವುದಿಲ್ಲ. ಅಮೆರಿಕದ ನಟಿಯೊಬ್ಬಳ ನಾಯಿ ಯಾವುದೋ ವಿಮಾನದ ಕ್ಯಾಬಿನ್ ಕ್ರ್ಯೂಗೆ ಕಚ್ಚಿದರೆ, ನಮ್ಮ ದೇಶದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅದಕ್ಕೆ ಕಾಲು ಪುಟದಷ್ಟು ದೊಡ್ಡದಾದ ಆ ನಟಿಯ ಚಿತ್ರ ಹಾಕಿ, ರೀಮುಗಟ್ಟಲೇ ಬರೆಯುತ್ತಾರೆ. ಅದೇ ಸೌದಿ ಅರೇಬಿಯಾದಲ್ಲಿ ೫೦ ಜನ ಮುಗ್ದ ಜನರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದರೆ, ಅದು ಸುದ್ದಿಯೇ ಆಗುವುದಿಲ್ಲ.

ಶಿಲ್ಪಾ ಶೆಟ್ಟಿಗೆ ಅಮೆರಿಕದ ಚಿತ್ರನಟ ಮುತ್ತು ಕೊಟ್ಟರೆ ನಮ್ಮ ಮಾಧ್ಯಮಗಳಿಗೆ ಅದು ದೊಡ್ಡ ಸುದ್ದಿ. ಇಡೀ ದಿನ ಅದನ್ನೇ ತೋರಿಸಲಾಗುತ್ತದೆ. ಆದರೆ, ಅದೇ ಶುಭಾ ಮುದುಗಲ್, ದೆಹಲಿಯ ನೆಹರು ಪಾರ್ಕಿನಲ್ಲಿ ಸುಶ್ರಾವ್ಯವಾಗಿ ಎರಡು ತಾಸು ಸಂಗೀತ ಕಚೇರಿ ನಡೆಸಿಕೊಟ್ಟರೆ, ಅದರ ಸುದ್ದಿ ನಮ್ಮ ಮಾಧ್ಯಮಗಳಲ್ಲಿ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಯಾಕೆಂದರೆ, ಶುಭಾ ಮುದುಗಲ್ ಸಂಗೀತ ಕಚೇರಿ ಕಾರ್ಯಕ್ರಮ ಪ್ರಸಾರ ಮಾಡಿದರೆ, ಅದು ಅವರಿಗೆ ಟಿಆರ್‌ಪಿ ಗಳಿಸಿಕೊಡುವುದಿಲ್ಲ. ಟಿಆರ್‌ಪಿ ಬರದೇ ಹೋದರೆ, ಚಾನಲ್‌ಗೆ ಲಾಭವಾಗುವುದಿಲ್ಲ. ಲಾಭವಾಗದೇ ಹೋದರೆ, ಹಣ ಹಾಕಿದ ಧಣಿಯ ದುಡ್ಡು ಮರಳಿ ಬರುವುದಿಲ್ಲ. ಹೀಗಾಗಿ ಆತ ಹಾಕಿದ ಹಣ ಮರಳಿ ಬರಬೇಕು ಎಂದರೆ, ಶಿಲ್ಪಾ ಶೆಟ್ಟಿಯ ಕಿಸ್ ಪ್ರಕರಣವೇ ಆಗಬೇಕು.

ಪ್ರತಿದಿನ ನಮಗೆ ಸೆನ್ಸೇಷನ್ ಸುದ್ದಿಯೇ ಬೇಕು ಎನ್ನುತ್ತವೆ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್) ಪೀಡಿತ ಸುದ್ದಿ ಮಾಧ್ಯಮಗಳು. ಪ್ರತಿ ದಿನ ಶಿಲ್ಪಾ ಶೆಟ್ಟಿಗೆ ಯಾವನಾದರೂ ಕಿಸ್ ಕೊಡಬೇಕು; ಪ್ರತಿದಿನ ಯಾವುದಾದರೂ ಚುನಾವಣಾ ಪ್ರಚಾರ ಸಭೆಯಲ್ಲಿ ನಂಗಾ ನಾಚ್ ನಡೆಯಲೇ ಬೇಕು; ಪ್ರತಿದಿನ ಶಾಸಕರ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಪ್ರತಿದಿನ ಆರುಷಿ-ಹೇಮರಾಜ್‌ನಂಥವರನ್ನು ಯಾರಾದರೂ ನಿಗೂಢವಾಗಿ ಕೊಲೆ ಮಾಡಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಜೊತೆಗೆ ಪತ್ರಿಕೋದ್ಯಮದಲ್ಲಿ ಅಕೌಂಟಿಬಿಲಿಟಿ ಕೂಡ ಹೊರಟು ಹೋಗುತ್ತಿದೆ. ಅಕೌಂಟಬಿಲಿಟಿ ಪ್ರಶ್ನೆ ಬಂದಾಗ ಪತ್ರಿಕೋದ್ಯಮಿಗಳು ಕೊಸರಿಕೊಳ್ಳುತ್ತಾರೆ. ನಾವೂ ಕೂಡ ಅಕೌಂಟೇಬಲ್ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಒಟ್ಟಾರೆಯಾದ ಸಾಮಾನ್ಯವಾದ ಅರ್ಥದಲ್ಲಿ ಹೇಳಬೇಕೆಂದರೆ, ಮಾನವೀಯತೆ ಮಾಯವಾಗುತ್ತಿದೆ. ಈ ಮೊದಲು, ಪತ್ರಿಕೋದ್ಯಮಿಗಳೆಂದರೆ, ತುಂಬ ಬುದ್ಧಿವಂತರು, ಸಾಕಷ್ಟು ಪುಸ್ತಕಗಳನ್ನು ಓದಿಕೊಂಡವರು, ಅತ್ಯಂತ ಅಧ್ಯಯನಶೀಲರು, ಯಾವುದೇ ಒಂದು ವಿಚಾರದ ಬಗ್ಗೆ ಕರಾರುವಕ್ಕಾಗಿ ಮಾತನಾಡುವವರು, ಇಂಟಲೆಕ್ಚುವಲ್ಸ್ ಎಂದೆಲ್ಲ ಭಾವಿಸಲಾಗುತ್ತಿತ್ತು. ಅಂಥ ಇಂಟಲೆಕ್ಚುವಲ್ಸ್ ಈಗ ಬೆರಳೆಣಿಕೆಯಷ್ಟು ಜನ ಸಿಗುತ್ತಾರೆ. ಒಟ್ಟಾರೆಯಾಗಿ ಮಾನವೀಯತೆ ಮರೆಯಾಗಿರುವುದರಿಂದ ಯಾವುದೇ ಪತ್ರಕರ್ತರನ್ನು ಮಾತನಾಡಿಸುವುದು ಕಷ್ಟ. ತುಂಬಾ ನ್ಯಾರೋ ಆಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ.

ಇದಕ್ಕೆಲ್ಲ ಪರಿಹಾರಗಳೆಂದರೆ,

ಮುಖ್ಯವಾಗಿ ಪತ್ರಿಕೋದ್ಯಮವು ಇನ್ ಆಲ್ ಸೆನ್ಸ್ ಅತ್ಯುತ್ತಮ ’ಫೋರ್ತ್ ಎಸ್ಟೇಟ್’ ಆಗಿ ಹೊರ ಹೊಮ್ಮಬೇಕು. ಅದೇ ಅತ್ಯಂತ ದೊಡ್ಡ ಪರಿಹಾರವಾಗಿ ಬಿಡುತ್ತದೆ.

ಪತ್ರಿಕೋದ್ಯಮಕ್ಕೂ ಬದ್ಧತೆ ಇದೆ, ಅಕೌಂಟಬಿಲಿಟಿ ಇದೆ ಎಂಬುದು ಸಾಬೀತಾಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ವೆಲ್ ರೆಡ್, ವೆಲ್ ನಾಲೇಡ್ಜಬಲ್ ಆದವರ ಸಂಖ್ಯೆ ನೂರಕ್ಕೆ ನೂರರಷ್ಟು ಆಗಬೇಕು. ಕೇವಲ ಟಿಆರ್‌ಪಿ ಹಿಂದೆ ಬೀಳದೇ, ಮಾನವೀಯತೆಯೇ ಮೇಲುಗೈ ಸಾಧಿಸಬೇಕು. ಎಲ್ಲೋ ಕುಳಿತ ಯಾರೋ ನಮ್ಮ ಮಾಧ್ಯಮವನ್ನು ಕಂಟ್ರೋಲ್ ಮಾಡದೇ, ನಮ್ಮಗಳ ಮಾನವೀಯತೆಯೇ ಅವುಗಳನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಮಾರ್ಕೆಟ್ ಎಕಾನಮಿಯ ದಾಳದಂತೆ ಬಳಕೆಯಾಗುತ್ತಿರುವುದರಿಂದ ಮಾಧ್ಯಮಗಳು ಹೊರ ಬರಬೇಕು.

ಬಹುಜನ ಹಿತಾಯ, ಬಹುಜನ ಸುಖಾಯ ಎಂಬುದು ಇಡೀ ಮಾಧ್ಯಮ ಕ್ಷೇತ್ರದ ಮೂಲ ಮಂತ್ರವಾಗಬೇಕು.


* * *

No comments:

Post a Comment